ಜೈವಿಕ ತಂತ್ರಜ್ಞಾನ

	ಸೂಕ್ಷ್ಮಜೀವಿ ಅಥವಾ ಯಾವುದೇ ಜೀವಿಯ ಜೀವಕೋಶಗಳನ್ನು ಬಳಸಿ ಮಾನವನಿಗೆ ಉಪಯುಕ್ತವಾಗುವಂತೆ ಅವನ್ನು ನಿರ್ದೇಶಿಸುವ ಯಾಂತ್ರಿಕ ವಿಧಾನವೇ ಜೈವಿಕ ತಂತ್ರಜ್ಞಾನ. ಜೈವಿಕ ತಂತ್ರಜ್ಞಾನದ ಮುಖ್ಯೋದ್ದೇಶ ಮಾನವನ ಕಲ್ಯಾಣದ ಗುರಿಯಾಗಿದ್ದರೂ ಅದರ ಸಾಧಕ-ಬಾಧಕಗಳ ಪರಾಮರ್ಶೆಗೆ ಪೂರ್ಣ ಮಾಹಿತಿಗಳಿಲ್ಲ. ಈ ತಂತ್ರಜ್ಞಾನವು ವಿಶೇಷ ವಿಜ್ಞಾನ ಶಾಖೆಯಾದರೂ ಇದೊಂದು ವಿವಿಧ ವಿಜ್ಞಾನ ಶಾಖೆಗಳ ಕಲಸು ಮೇಲೋಗರ ಎನ್ನಬಹುದು. ಇಲ್ಲಿ ಜೀವ ರಸಾಯನಶಾಸ್ತ್ರ, ಸೂಕ್ಷ್ಮಜೀವಿ ಶಾಸ್ತ್ರ, ತಳಿ ತಂತ್ರಜ್ಞಾನ, ಭೌತಶಾಸ್ತ್ರ, ಅಣುವಿಜ್ಞಾನ, ಪರಿಸರ, ಧರ್ಮ ಮತ್ತು ನೀತಿಶಾಸ್ತ್ರ ಮುಂತಾದ ಹಲವಾರು ಶಾಖೆಗಳು ಮಿಳಿತವಾಗಿವೆ.

	ಇಂತಹ ತಂತ್ರಜ್ಞಾನ ಮಾನವನಿಗೆ ಹೊಸದೇನಲ್ಲ ಇತಿಹಾಸದುದ್ದಕ್ಕೂ, ಬ್ರೆಡ್, ದ್ರಾಕ್ಷಾರಸ, ದೋಸೆ, ಇಡ್ಲಿ ಮುಂತಾದ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗಿದೆ ಎಂಬ ವಾದವೂ ಇದೆ. ಆಧುನಿಕ ವಿಜ್ಞಾನ ಯುಗದಲ್ಲಿ ಈ ತಂತ್ರಜ್ಞಾನವನ್ನು ಅರ್ಥಪೂರ್ಣವಾಗಿ ಗುರುತಿಸಿದ್ದು 1973ರಲ್ಲಿ ಎನ್ನಬಹುದು. ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಹರ್ಬರ್ಟ್ ಬೇಯರ್ ಮತ್ತು ಸ್ಟಾನ್ಲೆ ಕೊಹೆನ್ ಮಾನವ `ಡಿ.ಎನ್.ಎ'ನ್ನು ಬ್ಯಾಕ್ಟೀರಿಯಾದ `ಡಿ.ಎನ್.ಎ' ಯೊಂದಿಗೆ ಯಶಸ್ವಿಯಾಗಿ ಸಂಯೋಜಿಸಿದರು. ಈ ಸಂಯೋಜಿಸಿದ ಬ್ಯಾಕ್ಟೀರಿಯಾ ಮಾನವ ಪ್ರೋಟಿನ್ ತಯಾರಿಕೆಯ ನಿರ್ದೇಶನ ನೀಡುವಂತಾದಾಗ ಜೈವಿಕ ತಂತ್ರಜ್ಞಾನದ ಹೊಸ ಹೆಜ್ಜೆ ಪ್ರಾರಂಭವಾಯಿತು. ಅಲ್ಲಿಂದೀಚೆಗೆ ನಾಗಾಲೋಟದಲ್ಲಿ ಸಾಗಿರುವುದನ್ನು ಕಾಣಬಹುದು. ಅತ್ಯಂತ ಕಡಿಮೆ ಅವಧಿಯಲ್ಲ ಬಹುಜನಪ್ರಿಯವಾಗಿ ಮಾನವನ ಪ್ರತಿಯೊಂದು ಕ್ಷೇತ್ರದಲ್ಲೂ ಲಗ್ಗೆ ಹಾಕಿರುವ ಜೈವಿಕ ತಂತ್ರಜ್ಞಾನಕ್ಕೆ ಸರಿಸಾಟಿಯಾಗಿ ನಿಲ್ಲಬಲ್ಲ ಮತ್ತೊಂದು ವಿಜ್ಞಾನ ಶಾಖೆ ಇಲ್ಲವೆನ್ನಬಹುದು.

	ವೈದ್ಯಶಾಸ್ತ್ರ, ಕೈಗಾರಿಕೆ, ಕೃಷಿ, ಪಶುಸಂಗೋಪನೆ, ಪರಿಸರ ನಿರ್ವಹಣೆ - ಹೀಗೆ ಅನೇಕ ಕ್ಷೇತ್ರಗಳಲ್ಲಿ ಇದರ ಅಳವಡಿಕೆಯಾಗಿದೆ. 

ಜೈವಿಕ ತಂತ್ರಜ್ಞಾನದಲ್ಲಿ ಅತ್ಯಂತ ಮುಖ್ಯವಾದ ಘಟ್ಟವೆಂದರೆ ಮರು ಸಂಯೋಜನಾ ಡಿ.ಎನ್.ಎ. ತಂತ್ರಜ್ಞಾನ (Recombinant DNA technology) :- ಈ ವಿಧಾನದಲ್ಲಿ ಜೀವಿಯೊಂದರ ವಂಶವಾಹಿ / ಜೀನ್‍ಗಳನ್ನು ಪ್ರತ್ಯೇಕಿಸಿ, ವೃದ್ಧಿಸಿ, ಅವುಗಳನ್ನು ವಿವರವಾಗಿ ಅಭ್ಯಸಿಸಿ, ಅದನ್ನು ಮತ್ತೊಂದು ಜೀವಿಯಲ್ಲಿ ಅಡಕವಾಗುವಂತೆ ಮಾಡಲಾಗುವುದು. ಇದನ್ನು ತಳಿ ತಂತ್ರಜ್ಞಾನ ಅಥವಾ ಅಣ್ವತಂತ್ರ ಜ್ಞಾನವೆಂದೂ ಹೇಳಬಹುದು. ಹೀಗೆ ಸ್ವರೂಪದಿಂದ ಅನ್ಯರೂಪ ಡಿ.ಎನ್.ಎ. ಜೋಡಿಸಿಕೊಂಡ ಜೀವಿಯನ್ನು ಉಒಔ (ಜೆನೆಟಿಕಲಿ ಮ್ಯಾನಿಪ್ಯುಲೇಟೆಡ್ ಆರ್ಗಾನಿಸಂ - ಕುಲಾಂತರಿ ಜೀವಿ) ಎನ್ನುತ್ತೇವೆ. 

ಈ ವಿಧಾನದಲ್ಲಿ ಬಳಸುವ ಘಟಕಗಳೆಂದರೆ,

1) ವಂಶವಾಹಿಯನ್ನು ಪ್ರತ್ಯೇಕಿಸುವುದು : ಜೀವಕೋಶಗಳಲ್ಲಿ ನಡೆಯುವ ಪ್ರತಿಯೊಂದು ಕಾರ್ಯವೂ ಆ ಕೋಶದ ಕೇಂದ್ರಕದಲ್ಲಿ ಅಡಕವಾಗಿರುವ ವಂಶವಾಹಿಗಳೇ ನಿರ್ವಹಿಸುತ್ತವೆ. ವಂಶವಾಹಿಗಳು ಡಿ.ಎನ್.ಎ ನಿಂದಾಗಿವೆ. ಈ ಅಣುಗಳು ಲಿಪ್ಯಂತರ ವಿಧಾನದಲ್ಲಿ ಆರ್. ಎನ್. ಎ. ಎಂಬ ದೂತ ಅಣುಗಳನ್ನು ತಯಾರಿಸುತ್ತವೆ. ಈ ದೂತಾಣುಗಳು ಕೋಶರಸದಲ್ಲಿ ಜೀನ್‍ಗಳ ಸಾಂಕೇತಿಕ ಭಾಷೆಯನ್ನು ಪ್ರೋಟಿನ್ ಅಣುಗಳಾಗಿ ಭಾಷಾಂತರಿಸುತ್ತವೆ. ಇಂತಹ ಲಿಪ್ಯಂತರಣ ಮತ್ತು ಭಾಷಾಂತರಣವನ್ನು "ಸಾರ್ವತ್ರಿಕ ಪದ್ಧತಿ" ಎನ್ನಬಹುದು. ಈ ಎಲ್ಲಾ ಕ್ರಿಯೆಗಳೂ ನಿರ್ದಿಷ್ಟ ಕಿಣ್ವಗಳ ಸಹಾಯದಿಂದ ನಡೆಯುತ್ತವೆ. ಯಾವ ಜೀನ್ ಯಾವ ಪ್ರೋಟಿನ್ ಉತ್ಪಾದಿಸಲು ಸಹಾಯಕ ಎಂದು ಗುರುತಿಸಿ ಪ್ರತ್ಯೇಕಿಸುವ ವಿಧಾನವೇ ಮೊದಲ ಘಟ್ಟ.

2) ಪ್ರತ್ಯೇಕಿಸಿದ ಜೀನ್ ಅನ್ನು ಮತ್ತೊಂದು ಸೂಕ್ಷ್ಮಜೀವಿಯೊಳಗೆ ಸೇರಿಸುವುದು : ಸಾಮಾನ್ಯವಾಗಿ ಬ್ಯಾಕ್ಟೀರಿಯಾ, ಯೀಸ್ಟ್ ಮುಂತಾದ ಸೂಕ್ಷ್ಮ ಜೀವಿಗಳಲ್ಲಿ ಟ್ರಾನ್ಸ್ ಫೆಕ್ಷನ್, ಟ್ರಾನ್ಸ್ ಡಕ್ಷನ್, ಸೂಕ್ಷ್ಮ ಅಂತಃಕ್ಷೇಪನ, ಎಲೆಕ್ಟ್ರೋಪೊರೇಷನ್ ಮುಂತಾದ ವಿಧಾನಗಳನ್ನು ಬಳಸಿ, ಅವುಗಳ ಡಿ.ಎನ್.ಎಯೊಂದಿಗೆ ನಿರ್ದಿಷ್ಟ ಜೀನ್ ಅನ್ನು ಸಂಯೋಜಿಸಲಾಗುವುದು.

3) ಆಯ್ಕೆಯಾದ ನಿರ್ದಿಷ್ಟ ಜೀನ್ ಸೂಕ್ಷ್ಮಾಣುಗಳ ಜೀನ್‍ಗಳೊಂದಿಗೆ ಸೇರುವುದರಿಂದ ಇದನ್ನು ಮರು/ಪುನಃ ಸಂಯೋಜಿತ ಡಿ.ಎನ್.ಎ. ಎನ್ನುತ್ತೇವೆ. ಆಯ್ಕೆಯ ಜೀನ್‍ನೊಡನೆ ಬೆರೆತ ಸೂಕ್ಷ್ಮಾಣುವಿನ ಜೀನ್‍ನ್ನು ವಾಹಕ ಜೀನ್/ಡಿ.ಎನ್.ಎ. ಎಂದು ಕರೆಯಲಾಗುತ್ತದೆ.

4) ಹೀಗೆ ವಾಹಕ ಜೀನ್‍ನೊಂದಿಗೆ ಬೆರೆತ ನಿರ್ದಿಷ್ಟ ಜೀನ್‍ಗಳ ವೃದ್ಧಿಗಾಗಿ ಆ ಸೂಕ್ಷ್ಮಾಣುಗಳನ್ನು ಬೆಳೆಸುವ ವಿಧಾನವೇ ಕ್ಲೋನಿಂಗ್.
ಈ ಮೇಲಿನ ವಿಧಾನಕ್ಕೆ ಬಳಸುವ ತಂತ್ರಜ್ಞಾನ ಮತ್ತು ಕಿಣ್ವಗಳೆಂದರೆ,

ಎ) ಲಿಂಕರ್ (ಕೊಂಡಿಕಾರಕ) : ಈ ಲಿಂಕರ್‍ಗಳಿ ಆಲಿಗೋ ನ್ಯೂಕ್ಲಿಲೋ ಟೈಡ್‍ಗಳಿಂದಾಗಿವೆ. ಇವು ಅಸಮ ಡಿ.ಎನ್.ಎ ಅಣುಗಳನ್ನು ಲಿಗೇಸ್ ಎಂಬ ಕಿಣ್ವದ ಮೂಲಕ ಜೋಡಿಸಲು ಸಹಾಯಕ.
ಬಿ) ಡಿ.ಎನ್.ಎ. ಪಾಲಿಮರೇಸ್ : ಇವು ಡಿ.ಎನ್.ಎ. ಉತ್ಪಾದನೆಗೆ ಸಹಾಯಕ ಕಿಣ್ವ.
ಸಿ) ಡಿ.ಎನ್.ಎ. ಲಿಗೇಸ್ : ಇದು ದ್ವಿ ಹೆಲಿಕಲ್ ಸುರುಳಿಯಾದ ಡಿ.ಎನ್.ಎ. ಅಣು ರಚನೆಗೆ ಸಹಾಯಕ.
ಡಿ) ಮೀಥೈಲೀಕರಣ : ಈ ಕ್ರಿಯೆಯಿಂದ ಡಿ.ಎನ್.ಎ ಯನ್ನು ತುಂಡಿರಿಸುವ ಕಿಣ್ವಗಳನ್ನು ಹತೋಟಿಯಲ್ಲಿರಿಸಬಹುದು.
ಇ) ಡಿ.ಎನ್.ಎ ಯೇಸ್ : ಇವು ಡಿ.ಎನ್.ಎ. ಗಳನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಲು ಸಹಾಯಕವಾಗುವ ಕಿಣ್ವಗಳು.
     ಎಫ್) ಆರ್.ಎನ್.ಎ. ಪಾಲಿಮರೇಸ್ : ಇದು ಆರ್.ಎನ್.ಎ. ತಯಾರಿಕೆಯಲ್ಲಿ ಸಹಾಯಕವಾಗುವ ಕಿಣ್ವಗಳು.

	ಜೀನಾಲಯ (ಜೀನ್ ಲೈಬ್ರರಿ) : ಮರು ಸಂಯೋಜನಾ ಡಿ.ಎನ್.ಎ. ವಿಧಾನದಲ್ಲಿ ಪಡೆದ ಜೀನ್ ಕ್ಲೋನ್‍ಗಳನ್ನು ಸಂಗ್ರಹಿಸುವ ಹಾಗೂ ಅದನ್ನು ನಿರ್ದಿಷ್ಟವಾಗಿ ಬಳಸಲು ಅನುಕೂಲಮಾಡಿಕೊಡುವ ವ್ಯವಸ್ಥೆಯೇ ಜೀನಾಲಯ. 		
										(ಡಾ. ಎನ್.ಎಸ್. ಲೀಲಾ)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ